ಬೆಳವಡಿ ಮಲ್ಲವ್ವ - 
ಶಿವಾಜಿಯ ವಿರುದ್ಧ ಹೋರಾಡಿ ಖ್ಯಾತಳಾದ ಕರ್ನಾಟಕದ ಓರ್ವ ದೇಸಾಯಿತಿ. ಈಗ ಬೆಳಗಾಂವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನಲ್ಲಿ ಇರುವ ಬೆಳವಡಿ ಹಿಂದೆ 360 ಗ್ರಾಮಗಳ ಒಂದು ಸಂಸ್ಥಾನವಾಗಿತ್ತು. ಇಲ್ಲಿಯ ದೇಸಾಯಿ ಈಶಪ್ರಭು ಶಿರಸಿ ತಾಲ್ಲೂಕಿನ ಸೋಂದೆಯ ರಾಜಕುಮಾರಿ ಮಲ್ಲವ್ವಳನ್ನು ಮದುವೆಯಾಗಿದ್ದ. ಶಿವಾಜಿ ಬಿಜಾಪುರದ ವಿರುದ್ಧ ಹೂಡಿದ ಬಂಡಾಯದ ಸಂಧಿ ಸಾಧಿಸಿ ತಾನೂ ಬಿಜಾಪುರದ ವಿರುದ್ಧ ಸಿಡಿದೆದ್ದಿದ್ದ. ಶಿವಾಜಿಯ ಜೊತೆ ಒಪ್ಪಂದ ಮಾಡಿಕೊಳ್ಳಬೇಕೆಂದು ಉತ್ಸುಕನಾಗಿದ್ದ. 1678 ಏಪ್ರಿಲ್ ತಿಂಗಳಲ್ಲಿ ದಕ್ಷಿಣದ ದಂಡಯಾತ್ರೆಯಿಂದ ಮರಳುತ್ತಿದ್ದ ಶಿವಾಜಿಯ ಸೈನಿಕರು. ಬೆಳವಡಿ ದೇಸಗತಿಗೆ ಸೇರಿದ ಯಾದವಾಡದಲ್ಲಿ ಬೆಳವಡಿಯವರ ತುರುಗಳನ್ನು ಅಪಹರಿಸಿ ಯುದ್ಧಕ್ಕೆ ಕಾರಣರಾದರು. ಶಿವಾಜಿಯ ಸೇನಾನಿ ದಾದಾಜಿ ರಘುನಾಥ ಬೆಳವಡಿ ಕೋಟೆಯನ್ನು ಮುತ್ತಿದ. ಯುದ್ಧದಲ್ಲಿ ಈಶಪ್ರಭು ಸತ್ತ. ರಾಣಿ ಮಲ್ಲವ್ವ ಹೆದರದೆ ಬೆಳವಡಿ ಸೇನೆಯ ನಾಯಕತ್ವ ವಹಿಸಿ ಕೋಟೆಯಿಂದ ಮರಾಠರನ್ನು ಹೊರದೂಡಿದಳು. ಸೋಲಿನಿಂದ ಅವಮಾನಿತರಾದ ಶಿವಾಜಿಯ ಸೈನಿಕರು, ಕೋಟೆಯನ್ನು ತಿರುಗಿ ಮುತ್ತಿದರು. ಮೂರು ವಾರಗಳಿಗು ದೀರ್ಘಕಾಲ ಮುತ್ತಿಗೆ ಸಾಗಿತು. ಕಡೆಗೆ ಕೋಟೆಯಲ್ಲಿಯ ಆಹಾರ ತೀರಲು ರಾಣಿ ಬಾಗಿಲು ತೆರೆಸಿ ಹೊರಬಂದು ಹೋರಾಡಿ ಸೆರೆಸಿಕ್ಕಳು. ಶಿವಾಜಿ ವೀರ ರಾಣಿ ಮಲ್ಲವ್ವನನ್ನು ಮನ್ನಿಸಿ ಗೌರವಿಸಿ ಬಿಡುಗಡೆ ಮಾಡಿದ ಬೆಳವಡಿ ದೇಸಗತಿ ಶಿವಾಜಿಗೆ ಸಾಮಂತ ರಾಜ್ಯವಾಯಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ